ಯಾದಗಿರಿ: ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾಗಿರುವ ಅಶ್ಲೀಲ ವಿಡಿಯೋಗಳು ಇದ್ದ ಪೆನ್ಡ್ರೈವ್ ಬಿಡುಗಡೆಯಾಗುವದರ ಹಿಂದೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಕೈವಾಡವಿದೆ ಅಂತ ವಿಪಕ್ಷ ನಾಯಕರು ಆರೋಪ ಮಾಡುತ್ತಿದ್ದಾರೆ.
ಇದಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಪ್ರತಿಕ್ರಿಯಿಸಿ “ಪ್ರಜ್ವಲ್ ರೇವಣ್ಣ ಅವರು ಡಿಕೆ ಶಿವಕುಮಾರ್ ಅವರ ಮಾತು ಕೇಳಿ ಸೆಕ್ಸ್ ವಿಡಿಯೋ ಮಾಡಿಕೊಂಡ್ರಾ? ಅಥವಾ ಡಿಕೆ ಶಿವಕುಮಾರ್ ಏನು ಎಲ್ಲ ಹೆಣ್ಣು ಮಕ್ಕಳ ಸೆಕ್ಸ್ ವಿಡಿಯೋ ಮಾಡಿಕೊ ಅಂತ ಹೇಳಿದ್ರಾ? ಅಥವಾ ಡಿಕೆ ಶಿವಕುಮಾರ್ ವಿಡಿಯೋ ಮಾಡಿದ್ರಾ?” ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಯಾದಗಿರಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಪ್ರಜ್ವಲ್ ರೇವಣ್ಣ ವಿಡಿಯೋ ರೆಕಾರ್ಡ್ ಮಾಡಿಕೊಂಡು ಈಗ ಬೇರೆಯವರ ಮೇಲೆ ಹಾಕುತ್ತಿದ್ದಾರೆ. ಈ ವಿಡಿಯೋ ಬಿಡುಗಡೆ ಮಾಡಿದವರು ಯಾರು? ಎಷ್ಟು ಹೆಣ್ಣು ಮಕ್ಕಳ ವಿಡಿಯೋ ಮಾಡಿದ್ದಾರೆ? ನೇಹಾ ಹಿರೇಮಠ ಕೊಲೆಯಾದಾಗ ಬಿಜೆಪಿ ಮತ್ತು ಜೆಡಿಎಸ್ನವರು ಆರೋಪಿಯನ್ನು ಎನ್ಕೌಂಟರ್ ಮಾಡಬೇಕು ಅಂದರು. ಈಗ ಬಿಜೆಪಿ, ಜೆಡಿಎಸ್ನವರು ಎಲ್ಲಿದ್ದಾರೆ? ಪ್ರಜ್ವಲ್ನನ್ನು ಎನ್ಕೌಂಟರ್ ಮಾಡಿ ಅಂತ ಯಾಕೆ ಹೇಳುತ್ತಿಲ್ಲ? ಸಾಮಾನ್ಯ ಜನರಿಗೆ ಒಂದು ನ್ಯಾಯ, ದೊಡ್ಡವರಿಗೆ ಒಂದು ನ್ಯಾಯನಾ? ಎಂದು ಪ್ರಶ್ನಿಸಿದರು.