Mon. Jul 21st, 2025

5ನೇ ‘ಗ್ಯಾರಂಟಿ’ ‘ಯುವನಿಧಿ’ ನೋಂದಣಿ ಪ್ರಾರಂಭ,ಯುವನಿಧಿ ಯೋಜನೆ ಸದುಪಯೋಗ ಪಡೆದುಕೊಳ್ಳಲು ಬೇಕಾದ ಅರ್ಹತೆಗಳೇನು?

5ನೇ ‘ಗ್ಯಾರಂಟಿ’ ‘ಯುವನಿಧಿ’ ನೋಂದಣಿ ಪ್ರಾರಂಭ,ಯುವನಿಧಿ ಯೋಜನೆ ಸದುಪಯೋಗ ಪಡೆದುಕೊಳ್ಳಲು ಬೇಕಾದ ಅರ್ಹತೆಗಳೇನು?

ಡಿ ೨೬: ರಾಜ್ಯದ ಆಡಳಿರೂಢ ಕಾಂಗ್ರೆಸ್ ಸರ್ಕಾರದ ಚುನಾವಣಾ ಪ್ರಣಾಳಿಕೆಯ 5ನೇ ‘ಗ್ಯಾರಂಟಿ’ ಭರವಸೆ ‘ಯುವನಿಧಿ

’ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಗಳವಾರ ಚಾಲನೆ ನೀಡಿದ್ದು, ನೋಂದಣಿ ಪ್ರಕ್ರಿಯೆ ಆರಂಭವಾಗಿದೆ.

ನಗರದ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೊದಲು ಸಿಎಂ ಮತ್ತು ಗಣ್ಯರು, ಓರ್ವ ಯುವತಿ ಹಾಗೂ ಯುವಕನನ್ನ ವೇದಿಕೆ ಮೇಲೆ ಕರೆಸಿ ಜ್ಯೋತಿ ಬೆಳಗುವ ಮೂಲಕ ಚಾಲನೆ ನೀಡಿದರು.

ಬಳಿಕ ಸಿಎಂ ಹಾಗೂ ಡಿಸಿಎಂ ಯುವನಿಧಿ ಯೋಜನೆ ಪೋಸ್ಟರ್ ಬಿಡುಗಡೆ ಮಾಡಿದರು. ಇದೇ ವೇಳೆ ಸಿಎಂ ಅವರು ಯುವನಿಧಿ ಯೋಜನೆಯ ಲೋಗೋ ಬಿಡುಗಡೆ ಮಾಡಿದರು. ನಂತರ ಯುವನಿಧಿ ಯೋಜನೆ ನೋಂದಣಿ ಪ್ರಕ್ರಿಯೆಗೆ ಸಿದ್ದರಾಮಯ್ಯ ಅವರು ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ  ಸಚಿವ ಶರಣಪ್ರಕಾಶ ಪಾಟೀಲ್ ಅವರು, ಚುನಾವಣೆ ಮುನ್ನ 5 ಗ್ಯಾರಂಟಿ ಯೋಜನೆ ಬಗ್ಗೆ ವಾಗ್ದಾನ ಮಾಡಲಾಗಿತ್ತು. ಭಾರತದ ಇತಿಹಾಸದಲ್ಲಿ ನಮ್ಮ ಸರ್ಕಾರ ಹೊಸ ಇತಿಹಾಸ ಸೃಷ್ಟಿ ಮಾಡಿದೆ. ಮುಖ್ಯಮಂತ್ರಿಗಳು ಮೊದಲ ಸಂಪುಟದಲ್ಲಿ 5 ಗ್ಯಾರಂಟಿಗಳಿಗೆ ಒಪ್ಪಿಗೆ ಕೊಟ್ಟರು. ಇದು ಐತಿಹಾಸಿಕ ನಿರ್ಣಯ. ನಮ್ಮದು ನುಡಿದಂತೆ ನಡೆಯುವ ಸರ್ಕಾರ. 2013-18 ವರೆಗೆ ಉತ್ತಮ ಆಡಳಿತ ಕೊಟ್ಟಿದ್ದವು. 2023 ರಲ್ಲಿ ಜನ ನಂಬಿಕೆ ಇಟ್ಟು ಅಧಿಕಾರ ಕೊಟ್ಟಿದ್ದಾರೆ. ಜನರಿಗೆ ಕೊಟ್ಟ ಮಾತಿನಂತೆ 4 ಗ್ಯಾರಂಟಿ ಕಾರ್ಯಗತ ಮಾಡಿದ್ದೇವೆ‌. ಇಂದು 5ನೇ ಗ್ಯಾರಂಟಿ ಜಾರಿ ಮಾಡಿದ್ದೇವೆ ಎಂದು ಹೇಳಿದರು.

ನಮ್ಮ ಗ್ಯಾರಂಟಿ ಬಗ್ಗೆ ವಿಪಕ್ಷಗಳು ಟೀಕೆ ಮಾಡುತ್ತಿದೆ.

ನಮ್ಮ ಸರ್ಕಾರ ಬಡವರ ಮನೆಗೆ ಬೊಕ್ಕಸದ ಬಹುಪಾಲು ಹಣ ಕೊಡುತ್ತಿದ್ದೇವೆ. ಗೃಹಲಕ್ಷ್ಮಿ, ಗೃಹಜ್ಯೋತಿ, ಶಕ್ತಿ ಯೋಜನೆ, ಅನ್ನಭಾಗ್ಯ ಯೋಜನೆ ಇವೆಲ್ಲವೂ ಜಾರಿ ಆಗಿದೆ. ಮಾತು ಕೊಟ್ಟಂತೆ ನಡೆದಿದ್ದೇವೆ. ವಿಪಕ್ಷಗಳು ವಿಳಂಬ ಆಯ್ತು ಅಂತಾರೆ. ಆದರೆ ವಿಳಂಬವಾಗಿಲ್ಲ. ನಾವು ಪ್ರಣಾಳಿಕೆಯಲ್ಲಿ ಮಾತು ಕೊಟ್ಟಂತೆ ಜಾರಿ ಮಾಡುತ್ತಿದ್ದೇವೆ. ಯುವನಿಧಿ ದೇಶದಲ್ಲಿ ವಿಶೇಷ ಕಾರ್ಯಕ್ರಮವಾಗಿದೆ ಎಂದು ತಿಳಿಸಿದರು.

ಯುವಕ-ಯುವತಿಯರ ನೆರವಿಗಾಗಿ ಸರ್ಕಾರ ಬಂದಿದೆ.

2022-23 ರಲ್ಲಿ ಪಾಸ್ ಆಗಿರೋರು ಸೇವಾಸಿಂಧು, ಕರ್ನಾಟಕ ಒನ್, ಬೆಂಗಳೂರು ಒನ್ ನಲ್ಲಿ ಉಚಿತವಾಗಿ ರಿಜಿಸ್ಟರ್ ಮಾಡಿಕೊಳ್ಳಬಹುದು. ಯುವಕರಿಂದ ನಾವು ಯಾವುದೇ ಕೆಲಸ ಇಲ್ಲ ಅಂತ ಸೆಲ್ಫ್ ಡಿಕ್ಲರೇಷನ್‌ ಮಾತ್ರ ಕೇಳಿದ್ದೇವೆ.

5 ಲಕ್ಷ 20 ಸಾವಿರ ಯುವಕ-ಯುವತಿಯರು ಇದರ ಲಾಭ ಪಡೆಯಲಿದ್ದಾರೆ. ಎರಡು ವರ್ಷಗಳ ಕಾಲ ಹಣ ಕೊಡಲಿದ್ದೇವೆ. ಹಣದ ಜೊತೆ ರಿಜಿಸ್ಟರ್ ಆಗೋರಿಗೆ ಸ್ಕಿಲ್ ಕೊಡುವ ಪ್ರಯತ್ನ ಮಾಡಲು ಸಿಎಂ ಸೂಚನೆ ನೀಡಿದ್ದಾರೆ. ಅದರಂತೆ ಯುವಕ-ಯುವತಿಯರಿಗೆ ಸ್ಕಿಲ್ ತರಬೇತಿ ಕೊಡುತ್ತಿದ್ದೇವೆ ಎಂದರು.

ನಮ್ಮ ‌ಇಲಾಖೆಯಲ್ಲಿ ಕಲಿಕೆ ಜೊತೆ ಕೌಶಲ್ಯ ಜಾರಿ ಮಾಡುತ್ತಿದ್ದೇವೆ.

ಕಂಪನಿಗಳಲ್ಲಿ ಖಾಲಿ ಇರೋ ಹುದ್ದೆಗೆ ಬೇಕಾದ ಸ್ಕಿಲ್ ಟ್ರೈನಿಂಗ್ ಕೊಡುವ ಕೆಲಸ ಮಾಡುತ್ತಿದ್ದೇವೆ. ಸ್ಕಿಲ್ ಅಥಾರಿಟಿ ಸ್ಥಾಪನೆ ಮಾಡೋ ಕೆಲಸ ಮಾಡುತ್ತಿದ್ದೇವೆ. ಈ ರಾಜ್ಯದ ಜನ ಇಟ್ಟ ಭರವಸೆ ಈಡೇರಿಸುವ ಕೆಲಸ ಮಾಡುತ್ತಿದ್ದೇವೆ. ಜನ ಪರವಾದ ಕೆಲಸ ಮಾಡುತ್ತಿದ್ದೇವೆ. ಜನವರಿ 12 ರಂದು ವಿವೇಕಾನಂದ ಜಯಂತಿ ದಿನ ಶಿವಮೊಗ್ಗದಲ್ಲಿ ಫಲಾನುಭವಿಗಳ ಖಾತೆಗೆ ಹಣ ಹಾಕುತ್ತೇವೆಂದು  ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಚಿವರಾದ ನಾಗೇಂದ್ರ, ಪ್ರಿಯಾಂಕ್ ಖರ್ಗೆ, ಎಂ.ಸಿ. ಸುಧಾಕರ್, ಮಾಜಿ ರಾಜ್ಯಸಭಾ ಸದಸ್ಯ ರಾಜೀವ್ ಗೌಡ, ಸಿಎಂ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು ಉಪಸ್ಥಿತರಿದ್ದರು.

ಕಾಂಗ್ರೆಸ್‌ ಪಕ್ಷವು ಚುನಾವಣಾ ಪೂರ್ವದಲ್ಲಿ 5 ಗ್ಯಾರಂಟಿ ಯೋಜನೆಗಳನ್ನು ಘೋಷಣೆ ಮಾಡಿತ್ತು. ಇದರಂತೆ ಅಧಿಕಾರಕ್ಕೆ ಬಂದ ಬಳಿಕ ಐದು ಗ್ಯಾರಂಟಿಗಳ ಪೈಕಿ ನಾಲ್ಕು ಯೋಜನೆಗಳನ್ನು ಈಗಾಗಲೇ ಜಾರಿಗೆ ತಂದಿದ್ದು, 5ನೇ ಗ್ಯಾರಂಟಿಯಾಗಿರುವ ಯುವನಿಧಿ ಯೋಜನೆಗೆ ಚಾಲನೆ ನೀಡಲಾಗಿದೆ.

ಯೋಜನೆಯಲ್ಲಿ ಯುವಕರಿಗೆ ಕೆಲಸ ಸಿಗುವವರೆಗೆ ಹಣ ಲಭ್ಯವಾಗಲಿದೆ.  2022-23ನೇ ಸಾಲಿನಲ್ಲಿ ಪದವಿ, ಡಿಪ್ಲೋಮಾ ತೇರ್ಗಡೆ ಆಗಿ 6 ತಿಂಗಳಿಂದ ಉದ್ಯೋಗ ಸಿಗದೇ ಇರುವವರಿಗೆ ಯುವನಿಧಿ ಯೋಜನೆಯ ಲಾಭ ಸಿಗಲಿದೆ.

ಅಭ್ಯರ್ಥಿಗಳು ಸೇವಾಸಿಂಧು ಪೋರ್ಟಲ್, ಬಾಪೂಜಿ ಸೇವಾ ಕೇಂದ್ರ, ಕರ್ನಾಟಕ ಒನ್ ಸೇರಿದಂತೆ ಇತರೆ ಸೇವಾ ಕೇಂದ್ರಗಳಲ್ಲಿ ನೋಂದಣಿ ಮಾಡಿಕೊಳ್ಳಬೇಕು. ನೋಂದಣಿ ಮಾಡಿಕೊಳ್ಳಲು ಅಭ್ಯರ್ಥಿಗಳು ಯಾವುದೇ ಶುಲ್ಕವನ್ನು ಭರಿಸಬೇಕಾದ ಅಗತ್ಯ ಇಲ್ಲ.

ಯೋಜನೆ ಮೂಲಕ ಪದವೀಧರ ನಿರುದ್ಯೋಗಿಗಳಿಗೆ ಮಾಸಿಕ 3000 ರೂ. ನಿಗದಿ ಮಾಡಿದ್ದರೆ, ಡಿಪ್ಲೊಮ ಪಾಸ್ ನಿರುದ್ಯೋಗಿಗಳಿಗೆ ಮಾಸಿಕ 1500 ರೂ. ಸಿಗಲಿದೆ. ಕರ್ನಾಟಕ ಸರ್ಕಾರದ ಯುವ ನಿಧಿ ಯೋಜನೆಯಡಿ ನಿರುದ್ಯೋಗ ಭತ್ಯೆಯನ್ನು 2 ವರ್ಷಗಳ ಅವಧಿಗೆ ನಿರುದ್ಯೋಗಿ ಯುವಕರಿಗೆ ಮಾತ್ರ ನೀಡಲಾಗುತ್ತದೆ. ಫಲಾನುಭವಿಯು 2 ವರ್ಷಗಳ ನಂತರ ಅಥವಾ 2 ವರ್ಷಗಳ ಅವಧಿಯಲ್ಲಿ ಉದ್ಯೋಗವನ್ನು ಕಂಡುಕೊಂಡರೆ ನಿರುದ್ಯೋಗ ಭತ್ಯೆಯನ್ನು ತಕ್ಷಣವೇ ನಿಲ್ಲಿಸಲಾಗುತ್ತದೆ.

ಯುವನಿಧಿ ಯೋಜನೆ ಸದುಪಯೋಗ ಪಡೆದುಕೊಳ್ಳಲು ಬೇಕಾದ ಅರ್ಹತೆಗಳೇನು?
2022-23ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಪದವಿ ಪಡೆದು 6 ತಿಂಗಳು ಪೂರೈಸಿರಬೇಕು.
ಉನ್ನತ ಶಿಕ್ಷಣ ವ್ಯಾಸಾಂಗ ಅಥವಾ ಯಾವುದೇ ಉದ್ಯೋಗಕ್ಕೆ ಸೇರದೇ ಇರುವವರು ಅರ್ಜಿ ಸಲ್ಲಿಸಬಹುದು.
ಪದವಿ ಹೊಂದಿರುವವರಿಗೆ ಮತ್ತು ಡಿಪ್ಲೋಮಾ ತೇರ್ಗಡೆ ಆದವರಿಗೆ ಈ ಯೋಜನೆ ಅನ್ವಯಿಸಲಿದೆ.
ಯುವನಿಧಿ ಯೋಜನೆಯಡಿ ನಿರುದ್ಯೋಗಿ ಪದವೀಧರರಿಗೆ ಮಾಸಿಕ 3 ಸಾವಿರ ರೂ.
ಡಿಪ್ಲೋಮಾ ಹೊಂದಿರುವವರಿಗೆ 1,500 ರೂ. ಆರ್ಥಿಕ ನೆರವು.
2 ವರ್ಷದವರೆಗೆ ಯೋಜನೆಯ ಹಣವನ್ನು ಫಲಾನುಭವಿಗಳ ಖಾತೆಗೆ ನೇರವಾಗಿ ವರ್ಗಾವಣೆ ಮಾಡಲಾಗುತ್ತದೆ.

ಯುವನಿಧಿಗೆ ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳೇನು?
ಯುವನಿಧಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿ ಕರ್ನಾಟಕದವರಾಗಿರಬೇಕು.
ಕರ್ನಾಟಕದ ನಿವಾಸಿಯಾಗಿರುವ ಬಗ್ಗೆ ಸೂಕ್ತ ದಾಖಲೆ ಇರಬೇಕು.ಹತ್ತನೇ ತರಗತಿ, ದ್ವಿತೀಯ ಪಿಯುಸಿ ಹಾಗೂ ಪದವಿ ಅಂಕಪಟ್ಟಿ, ಆಧಾರ್‌ ಕಾರ್ಡ್‌, ಜಾತಿ ಪ್ರಮಾಣ ಪತ್ರ ಬ್ಯಾಂಕ್ ಖಾತೆ ವಿವರ, ಆದಾಯ ಪ್ರಮಾಣಪತ್ರ ದಾಖಲೆಯನ್ನೊಳಗೊಂಡ ಸ್ವಯಂ ಘೋಷಣಾ ಪ್ರತಿಯನ್ನು ಸಲ್ಲಿಸಬೇಕು.
2 ವರ್ಷಗಳ ನಂತರ ಅಥವಾ 2 ವರ್ಷಗಳ ಅವಧಿಯಲ್ಲಿ ಫಲಾನುಭವಿಗೆ ಉದ್ಯೋಗ ಸಿಕ್ಕರೆ ತಕ್ಷಣವೇ ನಿರುದ್ಯೋಗ ಭತ್ಯೆಯನ್ನು ಸ್ಥಗಿತಗೊಳಿಸಲಾಗುತ್ತದೆ.

ಇಂತಹವರು ಯುವನಿಧಿ ಯೋಜನೆಗೆ ಅರ್ಹರಾಗಿರುವುದಿಲ್ಲ…
ಉನ್ನತ ವ್ಯಾಸಂಗಕ್ಕೆ ವಿದ್ಯಾಭ್ಯಾಸ ಮುಂದುವರೆಸುವವರಿಗೆ
Apprentice ವೇತನವನ್ನು ಪಡೆಯುತ್ತಿರುವವರು
ಸರ್ಕಾರಿ ಅಥವಾ ಖಾಸಗಿ ವಲಯದಲ್ಲಿ ಉದ್ಯೋಗದಲ್ಲಿರುವವರಿಗೆ ಯೋಜನೆ ಅನ್ವಯವಾಗುವುದಿಲ್ಲ.
ರಾಜ್ಯ ಮತ್ತು ಕೇಂದ್ರದ ವಿವಿಧ ಯೋಜನೆಯಡಿ ಹಾಗೂ ಬ್ಯಾಂಕ್‌ಗಳಲ್ಲಿ ಸಾಲ ಪಡೆದು ಸ್ವಯಂ ಉದ್ಯೋಗ ಹೊಂದಿದವರಿಗೆ ಯೋಜನೆಯ ಫಲ ಸಿಗುವುದಿಲ್ಲ.

Whatsapp Group Join
facebook Group Join

Related Post

Leave a Reply

Your email address will not be published. Required fields are marked *

error: Content is protected !!